ದಶರಥ 2

 	ಮೌರ್ಯ ಚಕ್ರವರ್ತಿ ಅಶೋಕನ ಮೊಮ್ಮಗ. ಅವನ ಕಾಲದ ಶಾಸನ ಮತ್ತು ಸಾಹಿತ್ಯ ಅಶೋಕನ ಮೂರು ಮೊಮ್ಮಕ್ಕಳನ್ನು ಸೂಚಿಸುತ್ತವೆ. ಮೊದಲನೆಯವರು ದಶರಥ. ಕುನಾಲನ ಮಗ ಸಂಪ್ರತಿಯೂ ಸಂಘಮಿತ್ರನ ಪುತ್ರ ಸುಮನನೂ ಮತ್ತಿಬ್ಬರು. ಮತ್ಸ್ಯಪುರಾಣದಲ್ಲಿ ಅಶೋಕನ ಉತ್ತರಾಧಿಕಾರಿಗಳ ಪಟ್ಟಿಯಿದೆ. ದಶರಥ, ಸಂಪ್ರತಿ, ಸಥಧನ ಮತ್ತು ಬೃಹದ್ರಥ-ಇವರು ಅನುಕ್ರಮವಾಗಿ ಚಕ್ರವರ್ತಿಗಳಾದರು.

  	ದಶರಥ ಇತಿಹಾಸವ್ಯಕ್ತಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಗಯಾದ ಬಳಿಯ ನಾಗಾರ್ಜುನಿ ಬೆಟ್ಟದ ಶಿಲೆಯಲ್ಲಿ ಕಡೆದ ಗುಹೆಗಳಲ್ಲಿ ಮೂರು ಚಿಕ್ಕ ಶಾಸನಗಳು ದೊರೆತಿವೆ. ಆ ಗುಹೆಗಳನ್ನು ದಶರಥ ಅಜೀವಿಕ ಮುನಿಗಳಿಗೆ ದತ್ತಿಯಾಗಿ ಕೊಟ್ಟನೆಂದು ಆ ಶಾಸನಗಳಲ್ಲಿ ಹೇಳಿದೆ. ಅಲ್ಲದೆ ಅಶೋಕ ತನ್ನ ಶಾಸನಗಳಲ್ಲಿ ಉಪಯೋಗಿಸಿರುವ ದೇವಾನಾಂಪ್ರಿಯ ಎಂಬ ಬಿರುದನ್ನು ದಶರಥನೂ ತಳೆದಿದ್ದನೆಂಬುದು ಅವನ ಶಾಸನಗಳಿಂದ ತಿಳಿದುಬರುತ್ತದೆ.					    (ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ